ಬೂದಿರೋಗ - ಇತರೆ

ಇತರೆ

ಬೂದಿರೋಗ

Erysiphaceae


ಸಂಕ್ಷಿಪ್ತವಾಗಿ

 • ಎಲೆಗಳ ಮೇಲೆ ಹಳದಿ ಕಲೆಗಳು.
 • ಎಲೆಗಳು, ತೊಟ್ಟುಗಳು ಮತ್ತು ಹಣ್ಣುಗಳ ಮೇಲೆ ಹಿಟ್ಟಿನಂತಹ ಹೊದಿಕೆ.
 • ಎಲೆಗಳು ಕುಗ್ಗುತ್ತವೆ ಮತ್ತು ಉದುರುತ್ತವೆ.
 • ಕುಂಠಿತ ಬೆಳವಣಿಗೆ.

ರೋಗಲಕ್ಷಣಗಳು

ಮೊದಲಿಗೆ, ಹಳದಿ ಚುಕ್ಕೆಗಳು ಎಲೆಗಳ ಮೇಲಿನ ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ರೋಗದ ನಂತರದ ಹಂತದಲ್ಲಿ, ಬಿಳಿ ಬಣ್ಣದ ನಂತರ ಬೂದುಬಣ್ಣಕ್ಕೆ ತಿರುಗುವ, ಹಿಟ್ಟಿನಂತಹ ಪದರಗಳು ಎಲೆಗಳು, ಕಾಂಡಗಳು ಮತ್ತು ಹಣ್ಣುಗಳ ಮೇಲೆ ಹರಡುತ್ತವೆ. ಶಿಲೀಂಧ್ರವು ಸಸ್ಯದಿಂದ ಪೋಷಕಾಂಶಗಳನ್ನು ಹೀರುತ್ತದೆ ಮತ್ತು ಎಲೆಗಳ ಮೇಲಿನ ಬೂದಿ-ರೀತಿಯ ಪದರವು ದ್ಯುತಿಸಂಶ್ಲೇಷಣೆಗೆ ಅಡಚಣೆ ಉಂಟುಮಾಡುತ್ತದೆ. ಇದರಿಂದಾಗಿ ಸಸ್ಯದ ಬೆಳವಣಿಗೆ ಕುಂಠಿತವಾಗುತ್ತದೆ. ರೋಗ ಮುಂದುವರೆದಂತೆ, ಸೋಂಕಿತ ಭಾಗಗಳು ಒರಟಾಗುತ್ತವೆ, ಎಲೆಗಳು ಉದುರಿ ಹೋಗುತ್ತವೆ ಮತ್ತು ಸಸ್ಯಗಳು ಸಾಯಬಹುದು. ಡೌನಿ ಮಿಲ್ಡ್ಯೂಗೆ ವ್ಯತಿರಿಕ್ತವಾಗಿ ಪೌಡರೀ ಮಿಲ್ಡ್ಯೂ ಅಥವಾ ಬೂದಿರೋಗವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು.

ಪ್ರಚೋದಕ

ಶಿಲೀಂಧ್ರಗಳ ಬೀಜಕಗಳು ಎಲೆಯ ಮೊಗ್ಗುಗಳು ಮತ್ತು ಸಸ್ಯದ ಉಳಿಕೆಗಳ ಒಳಗೆ ಚಳಿಗಾಲವನ್ನು ಕಳೆಯುತ್ತವೆ. ಗಾಳಿ, ನೀರು ಮತ್ತು ಕೀಟಗಳು, ಬೀಜಕಗಳನ್ನು ಹತ್ತಿರದ ಸಸ್ಯಗಳಿಗೆ ರವಾನಿಸುತ್ತವೆ. ಪೌಡರೀ ಮಿಲ್ಡ್ಯೂ ಶಿಲೀಂಧ್ರವಾಗಿದ್ದರೂ ಸಹ, ಇದು ಸಾಮಾನ್ಯವಾಗಿ ಒಣ ಪರಿಸ್ಥಿತಿಯಲ್ಲಿ ಬೆಳೆಯಬಲ್ಲದು. ಇದು 10-12 °C ನಡುವಿನ ಉಷ್ಣಾಂಶದಲ್ಲಿ ಬದುಕಬಲ್ಲದು. ಆದರೆ 30 °C ಇದಕ್ಕೆ ಸೂಕ್ತ, ಅನುಕೂಲಕರ ಪರಿಸ್ಥಿತಿಯಾಗಿದೆ. ಡೌನಿ ಮಿಲ್ಡ್ಯೂಗೆ ವ್ಯತಿರಿಕ್ತವಾಗಿ ಸಣ್ಣ ಪ್ರಮಾಣದ ಮಳೆ ಮತ್ತು ಬೆಳಗಿನ ಕಾಲ ನಿಯಮಿತವಾಗಿ ಬೀಳುವ ಹಿಮ ಪೌಡರೀ ಮಿಲ್ಡ್ಯೂ ಹರಡುವಿಕೆಯನ್ನು ತೀವ್ರಗೊಳಿಸುತ್ತದೆ.

ಜೈವಿಕ ನಿಯಂತ್ರಣ

ಹಾಲು-ನೀರಿನ ದ್ರಾವಣಗಳು ಉದ್ಯಾನಗಳಲ್ಲಿ ನೈಸರ್ಗಿಕ ಶಿಲೀಂಧ್ರನಾಶಕಗಳಾಗಿ ಕಾರ್ಯನಿರ್ವಹಿಸುತ್ತವೆ. ಪ್ರತಿ ಎರಡು ದಿನಕ್ಕೊಮ್ಮೆ ಎಲೆಗಳಿಗೆ ಈ ದ್ರಾವಣವನ್ನು ಸಿಂಪಡಿಸಿ. ಈ ಮನೆ ಮದ್ದು ಕುಕುರ್ಬಿಟ್ಸ್ (ಸೌತೆಕಾಯಿ, ಕುಂಬಳಕಾಯಿ, ಝುಕಿನಿ) ಮತ್ತು ಬೆರ್ರಿ ಗಳ ಮೇಲೆ ಚೆನ್ನಾಗಿ ಕೆಲಸ ಮಾಡುತ್ತದೆ. ಆಶ್ರಯದಾತ ಸಸ್ಯಗಳನ್ನು ಆಧರಿಸಿ ಪೌಡರೀ ಮಿಲ್ಡ್ಟ್ಯೂ ವಿಧಗಳು ಭಿನ್ನವಾಗಿರುತ್ತವೆ. ಹೀಗಾಗಿ, ಈ ದ್ರಾವಣವು ಎಲ್ಲಾ ವಿಧಗಳಲ್ಲೂ ಪರಿಣಾಮಕಾರಿಯಾಗದೇ ಇರಬಹುದು. ಯಾವುದೇ ಸುಧಾರಣೆ ಕಂಡುಬರದೇ ಇದ್ದಲ್ಲಿ, ಬೆಳ್ಳುಳ್ಳಿ ಅಥವಾ ಸೋಡಿಯಂ ಬೈಕಾರ್ಬನೇಟ್ ದ್ರಾವಣವನ್ನು ಪ್ರಯತ್ನಿಸಿ. ವಾಣಿಜ್ಯ ಸಾವಯವ ಚಿಕಿತ್ಸೆಗಳು ಸಹ ಲಭ್ಯವಿವೆ. ಸಲ್ಫರ್, ಕ್ಯಾವೊನಿಡ್ ಆಮ್ಲ, ಬೇವಿನ ಎಣ್ಣೆ, ಕೊಯಾನಿನ್ ಅಥವಾ ಆಸ್ಕೋರ್ಬಿಕ್ ಆಮ್ಲವನ್ನು ಆಧರಿಸಿದ ಎಲೆಗಳ ದ್ರವೌಷಧಗಳು ತೀವ್ರವಾದ ಸೋಂಕನ್ನು ತಡೆಯಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳು, ತಡೆಗಟ್ಟುವ ಕ್ರಮಗಳನ್ನು ಒಳಗೊಂಡಂತಹ ಸಮಗ್ರ ವಿಧಾನವನ್ನು ಪರಿಗಣಿಸಿ. ಪೌಡರೀ ಮಿಲ್ಡ್ಯೂ ರೋಗಕ್ಕೆ ಒಳಗಾಗುವಂತಹ ಬೆಳೆಗಳ ಸಂಖ್ಯೆ ದೊಡ್ಡದಿರುವುದರಿಂದ ಯಾವುದೇ ನಿರ್ದಿಷ್ಟ ರಾಸಾಯನಿಕ ಚಿಕಿತ್ಸೆಯನ್ನು ಶಿಫಾರಸು ಮಾಡುವುದು ಕಷ್ಟ. ವೆಟ್ಟೆಬಲ್ ಸಲ್ಫರ್ (3ಗ್ರಾಂ/ಲೀ), ಕಾರ್ಬೆಂಡಜೀಮ್, ಟ್ರೈಫ್ಲುಮಿಝೋಲ್, ಮಿಕ್ಲೊಬ್ಯುಟನಾಲ್ ಅಥವಾ ಡಿನೊಕಾಪ್ (ಎಲ್ಲಾ 2 ಮಿಲೀ/ಲೀ) ಆಧರಿತ ಶಿಲೀಂಧ್ರನಾಶಕಗಳು ಕೆಲವು ಫಸಲುಗಳಲ್ಲಿ ಶಿಲೀಂಧ್ರಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತವೆ.

ಮುಂಜಾಗ್ರತಾ ಕ್ರಮಗಳು

 • ನಿರೋಧಕ ಅಥವಾ ಸಹಿಷ್ಣು ಪ್ರಭೇದಗಳನ್ನು ಬಳಸಿ.
 • ಉತ್ತಮವಾಗಿ ಗಾಳಿಯಾಡಲು ಅವಕಾಶವಾಗುವಂತೆ ಗಿಡಗಳ ನಡುವೆ ಸಾಕಷ್ಟು ಅಂತರವಿರಲಿ.
 • ಯಾವುದೇ ರೋಗ ಅಥವಾ ಕೀಟದ ಸಂಭವವನ್ನು ಗುರುತಿಸಲು ಹೊಲವನ್ನು ಆಗಾಗ್ಗೆ ಪರಿಶೀಲಿಸಿ.
 • ಮೊದಲ ಚುಕ್ಕೆಗಳು ಕಾಣಿಸಿಕೊಂಡಾಗಲೇ ಸೋಂಕಿತ ಎಲೆಗಳನ್ನು ತೆಗೆದುಹಾಕಿ.
 • ಸೋಂಕಿತ ಸಸ್ಯಗಳನ್ನು ಮುಟ್ಟಿದ ನಂತರ ಆರೋಗ್ಯಕರ ಸಸ್ಯಗಳನ್ನು ಸ್ಪರ್ಶಿಸಬೇಡಿ.
 • ಹಸಿಗೊಬ್ಬರದ ದಪ್ಪ ಪದರವೊಂದು ಮಣ್ಣಿನಲ್ಲಿರುವ ಬೀಜಕಗಳು ಎಲೆಗಳಿಗೆ ಹರಡುವುದನ್ನು ತಡೆಯಬಲ್ಲದು.
 • ಕೆಲವು ಸಂದರ್ಭಗಳಲ್ಲಿ, ರೋಗಕ್ಕೆ ಸೂಕ್ಷ್ಮವಲ್ಲದ ಬೆಳೆಗಳೊಂದಿಗೆ ಸರದಿ ಬೆಳೆ ವ್ಯವಸ್ಥೆ ಕೂಡ ಸಹಾಯ ಮಾಡುತ್ತದೆ.
 • ಸಮತೋಲಿತ ಪೌಷ್ಟಿಕಾಂಶ ಪೂರೈಸುವ ಮೂಲಕ ಫಲವತ್ತತೆ ಹೆಚ್ಚಿಸಿ.
 • ತೀವ್ರವಾದ ತಾಪಮಾನ ಬದಲಾವಣೆಯನ್ನು ತಪ್ಪಿಸಿ.
 • ಸುಗ್ಗಿಯ ನಂತರ ಮಣ್ಣನ್ನು ಸಂಪೂರ್ಣವಾಗಿ ಉಳುಮೆ ಮಾಡುವ ಮೂಲಕ ಸಸ್ಯದ ಉಳಿಕೆಗಳನ್ನು ಆಳದಿಂದ ಕಿತ್ತು ತೆಗೆಯಿರಿ.
 • ಸುಗ್ಗಿಯ ನಂತರ ಸಸ್ಯದ ಉಳಿಕೆಗಳನ್ನು ತೆಗೆದುಹಾಕಿ.