ಬಾಳೆಹಣ್ಣು

ಬಾಳೆಯ ಚುಕ್ಕೆ ರೋಗ ( ಬಾಳೆಯ ಆಂಥ್ರಾಕ್ನೋಸ್)

Colletotrichum musae

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಹಣ್ಣುಗಳ ಮೇಲೆ ಗಾಢ ಕಂದು ಬಣ್ಣದಿಂದ ಹಿಡಿದು ಕಪ್ಪು ಬಣ್ಣದಲ್ಲಿರಬಹುದಾದ ಗುಳಿಬಿದ್ದ ಚುಕ್ಕೆಗಳು.
  • ಇವು ಬಹು ದೊಡ್ಡ ತೇಪೆಗಳಾಗಿ ಬೆಳೆಯುತ್ತವೆ.
  • ಈ ಗುಳಿಗಳ ಮಧ್ಯದಲ್ಲಿ ಕಿತ್ತಳೆ ಅಥವಾ ನಸುಗೆಂಪು ಬಣ್ಣದಲ್ಲಿ ಶಿಲೀಂಧ್ರ ಬೆಳವಣಿಗೆ ಕಾಣಿಸಿಕೊಳ್ಳುತ್ತದೆ.
  • ಹಣ್ಣುಗಳು ಅಕಾಲಿಕವಾಗಿ ಹಣ್ಣಾಗುತ್ತವೆ ಮತ್ತು ಕೊಳೆಯುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಬಾಳೆಹಣ್ಣು

ರೋಗಲಕ್ಷಣಗಳು

ಶಿಲೀಂಧ್ರ ಸೋಂಕಿತ ಹಣ್ಣುಗಳ ಸಿಪ್ಪೆಯಲ್ಲಿ ಗಾಢ ಕಂದು ಅಥವಾ ಕಪ್ಪು ಬಣ್ಣದ ಗುಳಿಗಳು ಕಾಣಿಸಿಕೊಳ್ಳುತ್ತವೆ. ಆರಂಭಿಕ ರೋಗಲಕ್ಷಣಗಳು ಇನ್ನೂ ಹಣ್ಣಾಗದ ಹಸಿರು ಕಾಯಿಗಳಲ್ಲೇ ಗೋಚರಿಸುತ್ತವೆ. ಈ ಹಂತದಲ್ಲಿ ಸಿಪ್ಪೆಯ ಮೇಲೆ ಮಸುಕಾದ ಅಂಚುಗಳಿರುವ, ಗಾಢ ಕಂದು ಬಣ್ಣದಿಂದ ಹಿಡಿದು ಕಪ್ಪು ಬಣ್ಣದಲ್ಲಿರಬಹುದಾದ ಅವರೆಬೀಜದಾಕಾರದ ಗುಳಿಗಳಾಗಿ ಕಾಣಿಸಿಕೊಳ್ಳುತ್ತವೆ. ಹಣ್ಣು ಮಾಗಿ ಹಳದಿ ಬಣ್ಣಕ್ಕೆ ತಿರುಗುತ್ತಿದ್ದಂತೆ ಈ ಗಾಯಗಳು ವಿವಿಧ ಗಾತ್ರಗಳಲ್ಲಿ ಕಂಡು ಬಂದು, ಗಾಯಗಳೆಲ್ಲ ಒಟ್ಟಾಗಿ ಸಾಕಷ್ಟು ಅಗಲವಾದ ಕಪ್ಪು ಗುಳಿಗಳಾಗಬಹುದು. ಈ ಗುಳಿಗಳ ಮಧ್ಯದಲ್ಲಿ ಕಿತ್ತಳೆ ಅಥವಾ ನಸುಗೆಂಪು ಬಣ್ಣದಲ್ಲಿ ಶಿಲೀಂಧ್ರ ಬೆಳವಣಿಗೆ ಕಾಣಿಸಿಕೊಳ್ಳುತ್ತದೆ. ಈ ರೋಗಲಕ್ಷಣಗಳು ಹಣ್ಣುಗಳ ತುದಿಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭಿಸಬಹುದು. ಹೂವಿದ್ದಾಗಲೇ ತಗುಲಿದ ಸೋಂಕಿನಿಂದಾಗಿ ಹಣ್ಣಿಗೂ ಸೋಂಕು ತಗುಲಿರಬಹುದು. ಸೋಂಕಿಗೊಳಗಾದ ಹಣ್ಣುಗಳು ಅಕಾಲಿಕವಾಗಿ ಮಾಗಿ, ತಿರುಳು ಹಂತಹಂತವಾಗಿ ಕೊಳೆಯುತ್ತದೆ. ಮೊದಲ ಲಕ್ಷಣಗಳು ಕೊಯ್ಲು ನಡೆದ ಬಳಿಕ ಹಣ್ಣನ್ನು ಸಾಗಿಸುವಾಗ ಅಥವಾ ಶೇಖರಣೆಯ ಸಮಯದಲ್ಲಿ ಕಾಣಿಸಿಕೊಳ್ಳಬಹುದು.

Recommendations

ಜೈವಿಕ ನಿಯಂತ್ರಣ

ಕೊಯ್ಲಿನ ಸಮಯದಲ್ಲಿ ಹಣ್ಣುಗಳ ಮೇಲೆ 10% ಅರೇಬಿಕ್ ಗಮ್ ಮತ್ತು 1.0% ಕೈಟೊಸಾನಿನಿಂದ (ಕೈಟೊಸಾನ್ - ಕೈಟಿನ್ನಿನ ಒಂದು ಉತ್ಪನ್ನ) ತಯಾರಿಸಿದ ಸಾವಯವ ಶಿಲೀಂಧ್ರನಾಶಕವನ್ನು ಬಳಸುವುದರಿಂದ ಶೇಖರಣೆಯ ಸಮಯದಲ್ಲಿ ಸೋಂಕು ತಗುಲುವುದನ್ನು ಭಾಗಶಃ ತಪ್ಪಿಸಬಹುದೆಂದು ಕಂಡುಬಂದಿದೆ. ನಿಂಬೆ ಜಾತಿಯ ಹಣ್ಣಿನ ಸಾರ, ಶುಂಠಿ ಬೇರಿನ ಸಾರ ಮತ್ತು ಅಕೇಶಿಯ ಅಲ್ಬಿಡಾ, ನಾಡು ಅಶೋಕ ಮತ್ತು ಕುಂಡಲಿ ಗಿಡದ ಎಲೆಗಳ ಸಾರಗಳು ಸೇರಿದಂತೆ ರೋಗದ ಬೆಳವಣಿಗೆಯನ್ನು ತಪ್ಪಿಸಲು ಕೆಲವು ಸಸ್ಯ-ಆಧಾರಿತ ಮಿಶ್ರಣಗಳನ್ನು ಬಳಸುತ್ತಾರೆ. ಈ ಮಾಹಿತಿ ಆಶಾದಾಯಕವಾಗಿದ್ದರೂ ಇನ್ನೂ ಪ್ರಯೋಗಗಳನ್ನು ನಡೆಸಿ ದೃಢಪಡಿಸಬೇಕಾಗಿದೆ. ಇನ್ನೂ ಮಾಗದ ಹಸಿರು ಕಾಯಿಗಳನ್ನು 55°C ಬಿಸಿ ನೀರಿನಲ್ಲಿ 2 ನಿಮಿಷಗಳ ಕಾಲ ಮುಳುಗಿಸುವುದು ಸಹ ರೋಗ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಕೃಷಿ ಮಾಡುವ ಸಮಯದಲ್ಲಿ, ಮಾನ್ಕೊಝೆಬ್ (0.25%) ಅಥವಾ ಬೆಂಝೈಮಿಡಝಾಲ್ (0.05%) ಹೊಂದಿರುವ ಉತ್ಪನ್ನಗಳನ್ನು ಬಾಳೆ ಗೊಂಚಲಿಗೆ ಸಿಂಪಡಿಸಬಹುದು. ನಂತರ ಸೋಂಕನ್ನು ತಡೆಗಟ್ಟಲು ಬಾಳೆಗೊನೆಯನ್ನು ಹೊದಿಕೆಯಿಂದ ಮುಚ್ಚಿಡಬಹುದು. ಕೊಯ್ಲಿನ ಬಳಿಕ ಹಣ್ಣನ್ನು ಬೆಂಝೈಮಿಡಝಾಲ್ ಹೊಂದಿರುವ ಶಿಲೀಂಧ್ರನಾಶಕದಲ್ಲಿ ಮುಳುಗಿಸಿಡಬಹುದು ಅಥವಾ ಹಣ್ಣಿಗೆ ಅದನ್ನು ಸಿಂಪಡಿಸಬಹುದು. ಫುಡ್-ಗ್ರೇಡ್ ರಾಸಾಯನಿಕವಾದ ಬ್ಯುಟಿಲೇಟೆಡ್ ಹೈಡ್ರೊಕ್ಸಿಯಾನಿಸಾಲನ್ನು(BHA) ಹಣ್ಣುಗಳಿಗೆ ಲೇಪಿಸುವುದರಿಂದ ಈ ಶಿಲೀಂಧ್ರನಾಶಕಗಳ ಶಕ್ತಿ ಹೆಚ್ಚಬಹುದು.

ಅದಕ್ಕೆ ಏನು ಕಾರಣ

ಆಂಥ್ರಾಕ್ನೋಸ್ ರೋಗವು ಕೋಲೆಟೋಟ್ರಿಕಮ್ ಮುಸೇ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಇದು ಸತ್ತ ಅಥವಾ ಕೊಳೆತ ಎಲೆಗಳಲ್ಲಿ ಮತ್ತು ಹಣ್ಣುಗಳಲ್ಲೂ ಬದುಕಿಕೊಳ್ಳುತ್ತದೆ. ಅದರ ಬೀಜಕಗಳು ಗಾಳಿ, ನೀರು ಮತ್ತು ಕೀಟಗಳಿಂದ ಹರಡಬಹುದು. ಅಲ್ಲದೆ ಸೋಂಕಿತ ಹಣ್ಣನ್ನು ತಿನ್ನುವ ಹಕ್ಕಿ ಮತ್ತು ಇಲಿಗಳಿಂದಲೂ ಬೀಜಕಗಳು ಹರಡುತ್ತವೆ. ಈ ಶಿಲೀಂಧ್ರವು ಸಿಪ್ಪೆಯಲ್ಲಿನ ಸಣ್ಣ ಗಾಯಗಳ ಮೂಲಕ ಹಣ್ಣನ್ನು ಪ್ರವೇಶಿಸಿ ಸಕ್ರಿಯವಾಗುತ್ತದೆ. ಹೆಚ್ಚಿನ ತೇವಾಂಶ ಮತ್ತು ಹೆಚ್ಚಿನ ತಾಪಮಾನ ಇರುವ ಹಾಗೂ ಪದೇ ಪದೇ ಮಳೆಯಾಗುವ ಪ್ರದೇಶಗಳು ಈ ರೋಗಕ್ಕೆ ಅನುಕೂಲಕರ. ಮರದಲ್ಲಿ ಹಣ್ಣು ಮಾಗುತ್ತಿರುವಾಗ ಅಥವಾ ಕೊಯ್ಲಿನ ಬಳಿಕ ರೋಗವು ಕಾಣಿಸಿಕೊಳ್ಳಬಹುದು. ಸಾಗಣೆ ಮತ್ತು ಶೇಖರಣೆಯ ಸಂದರ್ಭದಲ್ಲಿ ಬಾಳೆ ಹಣ್ಣುಗಳ ಗುಣಮಟ್ಟವನ್ನು ಬಾಧಿಸುವ ಮುಖ್ಯ ರೋಗ ಇದು.


ಮುಂಜಾಗ್ರತಾ ಕ್ರಮಗಳು

  • ಕೊಯ್ಲಿನ ಸಮಯದಲ್ಲಿ, ಸಾಗಿಸುವಾಗ ಹಾಗೂ ಶೇಖರಣಾ ಸಮಯದಲ್ಲಿ ಬಾಳೆ ಹಣ್ಣಿನ ಅಂಗಾಂಶಗಳಿಗೆ ಹಾನಿಯಾಗುವುದನ್ನು ತಪ್ಪಿಸಿ.
  • ಸೋಂಕಿನಿಂದ ರಕ್ಷಿಸಲು ಗೊಂಚಲು ಮೂಡಿದ ಕೂಡಲೇ ಪ್ಲಾಸ್ಟಿಕ್ ಹೊದಿಕೆಗಳನ್ನು ಬಳಸಿ.
  • ಕೊಯ್ಲಿನ ನಂತರ ಸೋಂಕು ತಗುಲುವುದನ್ನು ತಪ್ಪಿಸಲು ಸಂಸ್ಕರಣಾ ಕೇಂದ್ರ ಮತ್ತು ಶೇಖರಣಾ ಕೇಂದ್ರಗಳನ್ನು ಸ್ವಚ್ಛವಾಗಿಡಿ.
  • ಹಣ್ಣಿನ ಸಿಪ್ಪೆಯಿಂದ ಶಿಲೀಂಧ್ರ ಬೀಜಕಗಳನ್ನು ತೆಗೆದುಹಾಕಲು ಹಣ್ಣುಗಳನ್ನು ನೀರಲ್ಲಿ ತೊಳೆಯಿರಿ.
  • ಕೊಳೆತ ಎಲೆಗಳನ್ನು ಮತ್ತು ಹೂವಿನ ಉಳಿದ ಭಾಗಗಳನ್ನು ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ