ಆಲೂಗೆಡ್ಡೆ ಸ್ಕ್ಯಾಬ್

 • ರೋಗಲಕ್ಷಣಗಳು

 • ಪ್ರಚೋದಕ

 • ಜೈವಿಕ ನಿಯಂತ್ರಣ

 • ರಾಸಾಯನಿಕ ನಿಯಂತ್ರಣ

 • ಮುಂಜಾಗ್ರತಾ ಕ್ರಮಗಳು

ಆಲೂಗೆಡ್ಡೆ ಸ್ಕ್ಯಾಬ್

Streptomyces scabies

ಬ್ಯಾಕ್ಟೀರಿಯಾ


ಸಂಕ್ಷಿಪ್ತವಾಗಿ

 • ಸಸ್ಯದ ವೈಮಾನಿಕ ಭಾಗಗಳಲ್ಲಿ ಯಾವುದೇ ರೋಗಲಕ್ಷಣಗಳಿರುವುದಿಲ್ಲ.
 • ಆಲೂಗಡ್ಡೆಯ ಮೇಲ್ಮೈ ಮೇಲೆ ಕಂದು ಬಣ್ಣದ, ಗಡಸಾದ ಗುಳ್ಳೆಗಳು.
 • ಆಲೂಗೆಡ್ಡೆ ಗೆಡ್ಡೆಗಳ ಮೇಲೆ ಆಳವಿಲ್ಲದ ಅಥವಾ ಆಳವಾದ ಕುಳಿಗಳು ಮತ್ತು ಬಲೆ ತರಹದ ಬಿರುಕುಗಳು.

ಆಶ್ರಯದಾತ ಸಸ್ಯಗಳು:

ಆಲೂಗಡ್ಡೆ

ರೋಗಲಕ್ಷಣಗಳು

ಎಲೆಗಳು, ಕಾಂಡಗಳು ಅಥವಾ ತೊಟ್ಟುಗಳಂತಹ ಸಸ್ಯದ ವೈಮಾನಿಕ ಭಾಗಗಳಲ್ಲಿ ಯಾವುದೇ ಲಕ್ಷಣಗಳು ಗೋಚರಿಸುವುದಿಲ್ಲ. ಆದಾಗ್ಯೂ, ರೋಗಕಾರಕವು ಆಲೂಗೆಡ್ಡೆಯ ಗೆಡ್ಡೆಗಳ ಮೇಲ್ಮೈಯಲ್ಲಿ ವಿಧವಿಧವಾದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಅವುಗಳೆಂದರೆ ಕೆಂಪು-ಕಂದು ಬಣ್ಣದಿಂದ ಕೂಡಿರುವ ಊದಿದ ಸಿಪ್ಪೆ, ಗೆಡ್ಡೆಗಳ ಮೇಲೆ ಆಳವಿಲ್ಲದ ಅಥವಾ ಆಳವಾದ ಕುಳಿಗಳು ಮತ್ತು ಬಲೆ ತರಹದ ಬಿರುಕುಗಳು. ಇದರಿಂದಾಗಿ ಇಳುವರಿ ನಷ್ಟಗಳು ಮತ್ತು ಆಲೂಗಡ್ಡೆ ಗೆಡ್ಡೆಗಳ ಗುಣಮಟ್ಟ ಕಡಿಮೆಯಾಗುತ್ತದೆ.

ಪ್ರಚೋದಕ

ಸೋಂಕಿತ ಅಂಗಾಂಶದಲ್ಲಿನ ಬೀಜಕಗಳಂತೆ ಸ್ಕ್ಯಾಬ್ ಗಳು ಮಣ್ಣಿನಲ್ಲಿ ಉಳಿದುಕೊಳ್ಳುತ್ತವೆ. ಇದು ಸಸ್ಯಗಳಿರುವ ಗಾಯಗಳ ಮೂಲಕ ಸಸ್ಯಗಳನ್ನು ಪ್ರವೇಶಿಸುತ್ತದೆ. ಗೆಡ್ಡೆ ಬೆಳವಣಿಗೆಯ ಸಮಯದಲ್ಲಿ ಒಣ ಮತ್ತು ಬೆಚ್ಚನೆಯ ವಾತಾವರಣವು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಬ್ಯಾಕ್ಟೀರಿಯಾಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕದ ಅಗತ್ಯವಿರುವುದರಿಂದ, ಸೋಂಕಿನ ಸಂಭವನೀಯತೆ ಸಡಿಲ ಮತ್ತು ಚೆನ್ನಾಗಿ ಗಾಳಿಯಾಡುವ ಮಣ್ಣಿನಲ್ಲಿ ಹೆಚ್ಚಾಗಿರುತ್ತದೆ. ಒಣ ಮತ್ತು ಕ್ಷಾರೀಯ ಮಣ್ಣಿನಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚು ಹರಡಿರುತ್ತವೆ.

ಜೈವಿಕ ನಿಯಂತ್ರಣ

ಕಾಂಪೋಸ್ಟ್, ಕಾಂಪೋಸ್ಟ್ ಚಹಾ ಅಥವಾ ಅವೆರಡರ ಸಂಯೋಜನೆಯೊಂದಿಗೆ ಆಲೂಗೆಡ್ಡೆ ಗಿಡಗಳ ಸಂಸ್ಕರಣೆ ಮಾಡಿದರೆ ಕಾಮನ್ ಸ್ಕ್ಯಾಬ್ ಗಡ್ಡೆ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು. ಬ್ಯಾಕ್ಟೀರಿಯಾದ ಸ್ಪರ್ಧಾತ್ಮಕ ತಳಿಗಳ ಆಧಾರದ ಮೇಲೆ ಜೈವಿಕ ಗೊಬ್ಬರಗಳು ಇಳುವರಿ ಮತ್ತು ಗೆಡ್ಡೆಗಳ ಗುಣಮಟ್ಟ ಎರಡನ್ನೂ ಹೆಚ್ಚಿಸಬಹುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಆಲೂಗೆಡ್ಡೆ ಸ್ಕ್ಯಾಬ್ ಗೆ ಸಂಬಂಧಿಸಿದ ರಾಸಾಯನಿಕ ಚಿಕಿತ್ಸೆಯು ಕಷ್ಟಕರವಾಗಿದೆ, ಏಕೆಂದರೆ ಇದರಿಂದ ಸಸ್ಯಗಳಿಗೆ ಗಾಯಗಳಾಗುವ ಸಾಧ್ಯತೆ ಹೆಚ್ಚು. ಫ್ಲಝಿನಾಮ್, ಆಕ್ಸಿಟೆಟ್ರಾಸಿಕ್ಲೈನ್ ಮತ್ತು ಸ್ಟ್ರೆಪ್ಟೊಮೈಸಿನ್, ಕ್ಲೋರೊಥಲೋನಿಲ್ ಮತ್ತು ಮನ್ಕೊಜೆಬ್ ಗಳನ್ನು ಬಳಸಿ ಬೀಜ ಸಂಸ್ಕರಣೆ ಮಾಡಿದಾಗ ಕಡಿಮೆ ಪ್ರಮಾಣದ ಸೋಂಕು ಕಂಡುಬಂದಿದೆ.

ಮುಂಜಾಗ್ರತಾ ಕ್ರಮಗಳು

 • ಸಹಿಷ್ಣು ಪ್ರಭೇದಗಳನ್ನು ನೆಡಿ.
 • ಸುಸಂಘಟಿತವಾದ ಭೂಮಿ ಸರದಿಯನ್ನು ಖಚಿತಪಡಿಸಿಕೊಳ್ಳಿ.
 • ನಿಯಮಿತವಾಗಿ ನೀರಾವರಿ ಮಾಡಿ ಮಣ್ಣಿನ ತೇವಾಂಶವನ್ನು ಚೆನ್ನಾಗಿ ಕಾಪಾಡಿಕೊಳ್ಳಿ ಮತ್ತು ಅತಿಯಾಗಿ ನೀರುಹಾಕುವುದನ್ನು ತಪ್ಪಿಸಿ.
 • ನಿರ್ದಿಷ್ಟ ರಸಗೊಬ್ಬರ ಬಳಕೆ ಯೋಜನೆಯೊಂದಿಗೆ ಮಣ್ಣಿನ pH ಮಟ್ಟವನ್ನು ಕಡಿಮೆ ಮಾಡಿ.
 • ಉದಾಹರಣೆಗೆ, ಕಡಿಮೆ ಮಣ್ಣಿನ pH ಅನ್ನು ನಿರ್ವಹಿಸಲು ಮತ್ತು ರೋಗದ ತೀವ್ರತೆಯನ್ನು ಕಡಿಮೆ ಮಾಡಲು ಧಾತುರೂಪದ ಸಲ್ಫರ್, ಜಿಪ್ಸಮ್ ಅಥವಾ ಅಮೋನಿಯಮ್ ಸಲ್ಫೇಟ್ ಅನ್ನು ಹಾಕಿ.
 • ನೆಡುವ ಮೊದಲು ಸುಣ್ಣ ಹಾಕಬೇಡಿ.