ಟೊಮೆಟೋ ನ ದಂಡಾಣು ಚುಕ್ಕೆ ರೋಗ (ಬ್ಯಾಕ್ಟೀರಿಯಲ್ ಸ್ಪಾಟ್)

  • ರೋಗಲಕ್ಷಣಗಳು

  • ಪ್ರಚೋದಕ

  • ಜೈವಿಕ ನಿಯಂತ್ರಣ

  • ರಾಸಾಯನಿಕ ನಿಯಂತ್ರಣ

  • ಮುಂಜಾಗ್ರತಾ ಕ್ರಮಗಳು

ಟೊಮೆಟೋ ನ ದಂಡಾಣು ಚುಕ್ಕೆ ರೋಗ (ಬ್ಯಾಕ್ಟೀರಿಯಲ್ ಸ್ಪಾಟ್)

Xanthomonas spp.

ಬ್ಯಾಕ್ಟೀರಿಯಾ


ಸಂಕ್ಷಿಪ್ತವಾಗಿ

  • ಎಳೆಯ ಎಲೆಗಳ ಮೇಲೆ ಸಣ್ಣ, ಹಳದಿ-ಹಸಿರು ಬಣ್ಣದ ಗಾಯಗಳು ಕಾಣಿಸುತ್ತವೆ.
  • ಎಲೆಗಳು ವಿರೂಪಗೊಳ್ಳುತ್ತವೆ ಮತ್ತು ತಿರುಚಿಕೊಳ್ಳುತ್ತವೆ.
  • ಹಳೆಯ ಎಲೆಗಳು ಮತ್ತು ಹಣ್ಣುಗಳ ಮೇಲೆ ಹಳದಿ ಬಣ್ಣದ ವರ್ತುಲಗಳಿರುವ ಗಾಢವಾದ, ನೀರಿನಲ್ಲಿ-ನೆನೆಸಿದಂತಹ ಗಾಯಗಳು ಕಂಡುಬರುತ್ತವೆ.

ಆಶ್ರಯದಾತ ಸಸ್ಯಗಳು:

ಟೊಮೆಟೊ

ರೋಗಲಕ್ಷಣಗಳು

ಈ ಬ್ಯಾಕ್ಟೀರಿಯಾವು ಎಲೆಗೊಂಚಲು, ಕಾಂಡಗಳು ಮತ್ತು ಟೊಮೆಟೊಗಳ ಹಣ್ಣುಗಳನ್ನು ಆಕ್ರಮಣ ಮಾಡುತ್ತದೆ. ಮೊಟ್ಟಮೊದಲ ರೋಗಲಕ್ಷಣಗಳೆಂದರೆ ಎಳೆಯ ಎಲೆಗಳ ಮೇಲೆ ಸಣ್ಣ, ಹಳದಿ-ಹಸಿರು ಬಣ್ಣದ ಗಾಯಗಳು, ಅವು ಸಾಮಾನ್ಯವಾಗಿ ವಿರೂಪಗೊಳ್ಳುತ್ತವೆ ಮತ್ತು ತಿರುಚಿಕೊಳ್ಳುತ್ತವೆ. ಹಳೆಯ ಎಲೆಗೊಂಚಲುಗಳಲ್ಲಿ, ಗಾಯಗಳು ಸಿರೆಗಳಿಗೆ ಸೀಮಿತವಾಗಿರುತ್ತವೆ. ಕಾಲಾನಂತರದಲ್ಲಿ ಅವು ಕೋನೀಯ ರಚನೆಯನ್ನು ಪಡೆದುಕೊಳ್ಳುತ್ತವೆ. ಅವು ಮೊದಲು ಗಾಢ-ಹಸಿರು ಬಣ್ಣದಲ್ಲಿದ್ದು, ಜಿಡ್ಡಿನಂತೆ ಕಾಣುತ್ತವೆ ಮತ್ತು ಸಾಮಾನ್ಯವಾಗಿ ಅದರ ಸುತ್ತ ಹಳದಿ ವರ್ತುಲವಿರುತ್ತದೆ. ಅವು ಸಾಮಾನ್ಯವಾಗಿ ಎಲೆ ಅಂಚುಗಳು ಅಥವಾ ತುದಿಗಳ ಮೇಲೆ ಅತಿ ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ. ಪರಿಸ್ಥಿತಿಗಳು ಅನುಕೂಲಕರವಾಗಿದ್ದರೆ, ಅವು 0.25 ರಿಂದ 0.5 ಸೆಂ.ಮೀ ಅಗಲಕ್ಕೆ ವೇಗವಾಗಿ ಹರಡುತ್ತವೆ ಮತ್ತು ಕಂದು-ಕೆಂಪು ಬಣ್ಣಕ್ಕೆ ಅಥವಾ ಹಳದಿ-ಕಂದು ಬಣ್ಣಕ್ಕೆ ತಿರುಗುತ್ತವೆ. ಅಂತಿಮವಾಗಿ, ಮಚ್ಚೆಗಳು ಶಾಟ್ ರಂಧ್ರಗಳಂತೆ ಕಾಣುತ್ತವೆ. ಏಕೆಂದರೆ ಗಾಯದ ಮಧ್ಯಭಾಗವು ಕ್ರಮೇಣ ಒಣಗಿ ಉದುರುತ್ತದೆ. ಹಣ್ಣಿನ ಮೇಲಿನ ಚುಕ್ಕೆಗಳು (0.5 ಸೆ.ಮೀ ವರೆಗೆ) ಹಳದಿ ವರ್ತುಲವಿರುವ ತಿಳಿ ಹಸಿರು, ನೀರಿನಲ್ಲಿ-ನೆನೆಸಿದಂತಹ ಪ್ರದೇಶಗಳಂತೆ ಪ್ರಾರಂಭವಾಗುತ್ತವೆ ಮತ್ತು ಅಂತಿಮವಾಗಿ ಗಟ್ಟಿಯಾಗಿ, ಕಂದು ಬಣ್ಣಕ್ಕೆ ತಿರುಗುತ್ತವೆ ಮತ್ತು ಸಿಡುಬುಗಳಾಗಿ ಮಾರ್ಪಡುತ್ತವೆ.

ಪ್ರಚೋದಕ

ದಂಡಾಣು ಚುಕ್ಕೆ ರೋಗವು ಕ್ಸಾಂಥೋಮೋನಸ್ ತಳಿಯ ಹಲವಾರು ಜಾತಿಗಳ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಇದು ವಿಶ್ವಾದ್ಯಂತ ಸಂಭವಿಸುತ್ತದೆ ಮತ್ತು ಬೆಚ್ಚಗಿನ, ಆರ್ದ್ರ ಪರಿಸರದಲ್ಲಿ ಬೆಳೆದ ಟೊಮೆಟೊಗಳ ಮೇಲೆ ಅತ್ಯಂತ ವಿನಾಶಕಾರಿ ರೋಗಗಳಲ್ಲಿ ಒಂದಾಗಿದೆ. ರೋಗಕಾರಕವು ಬೀಜಗಳ ಒಳಗೆ ಅಥವಾ ಬೀಜಗಳ ಮೇಲೆ, ಸಸ್ಯಾವಶೇಷಗಳ ಮೇಲೆ ಮತ್ತು ನಿರ್ದಿಷ್ಟ ಕಳೆಗಳ ಮೇಲೆ ಬದುಕಬಲ್ಲವು. ಇದಕ್ಕೆ ಮಣ್ಣಿನಲ್ಲಿ ಕೆಲವು ದಿನಗಳಿಂದ ಹಿಡಿದು ವಾರಗಳವರೆಗೆ ಬಹಳ ಸೀಮಿತ ಬದುಕುಳಿಯುವ ಅವಧಿಯಿರುತ್ತದೆ. ಪರಿಸ್ಥಿತಿಗಳು ಅನುಕೂಲಕರವಾಗಿದ್ದಾಗ, ಇದು ಆರೋಗ್ಯಕರ ಸಸ್ಯಗಳಿಗೆ ಮಳೆ ಅಥವಾ ತುಂತುರು ನೀರಾವರಿ ಮೂಲಕ ಹರಡುತ್ತದೆ. ಇದು ಎಲೆಯ ರಂಧ್ರಗಳು ಮತ್ತು ಗಾಯಗಳ ಮೂಲಕ ಸಸ್ಯ ಅಂಗಾಂಶಗಳಿಗೆ ಪ್ರವೇಶಿಸುತ್ತದೆ. ಸೂಕ್ತ ತಾಪಮಾನವು 25 ರಿಂದ 30 ° ಸಿ ವರೆಗಿರುತ್ತದೆ. ಬೆಳೆಗೆ ಒಮ್ಮೆ ಸೋಂಕಾದರೆ, ರೋಗವನ್ನು ನಿಯಂತ್ರಿಸುವುದು ತುಂಬಾ ಕಷ್ಟ ಮತ್ತು ಒಟ್ಟು ಬೆಳೆ ನಷ್ಟಕ್ಕೆ ಕಾರಣವಾಗಬಹುದು.

ಜೈವಿಕ ನಿಯಂತ್ರಣ

ದಂಡಾಣು ಚುಕ್ಕೆ ರೋಗವು ತುಂಬಾ ಕಷ್ಟಕರವಾದುದು ಮತ್ತು ಚಿಕಿತ್ಸೆಯಲ್ಲಿ ದುಬಾರಿಯಾದುದು. ಋತುವಿನ ಆರಂಭದಲ್ಲಿ ರೋಗವು ತಗುಲಿದರೆ, ಸಂಪೂರ್ಣ ಬೆಳೆಯನ್ನು ನಾಶಮಾಡುವ ಆಯ್ಕೆಯನ್ನು ಪರಿಗಣಿಸಿ. ತಾಮ್ರ ಆಧಾರಿತ ಬ್ಯಾಕ್ಟೀರಿಯಾನಾಶಕಗಳು ಎಲೆಗಳು ಮತ್ತು ಹಣ್ಣಿನ ಮೇಲೆ ರಕ್ಷಾಕವಚವನ್ನು ನೀಡುತ್ತವೆ. ನಿರ್ದಿಷ್ಟವಾಗಿ ಬ್ಯಾಕ್ಟೀರಿಯಾವನ್ನು ಕೊಲ್ಲುವ ಬ್ಯಾಕ್ಟೀರಿಯಾ ವೈರಸ್ಗಳು (ಬ್ಯಾಕ್ಟೀರಿಯೊಫೇಜಸ್) ಲಭ್ಯವಿವೆ. 1.3% ಸೋಡಿಯಂ ಹೈಪೋಕ್ಲೋರೈಟ್ ನಲ್ಲಿ ಸುಮಾರು ಒಂದು ನಿಮಿಷಗಳವರೆಗೆ ಅಥವಾ ಬಿಸಿ ನೀರಿನಲ್ಲಿ (50 °ಸಿ) 25 ನಿಮಿಷಗಳ ಕಾಲ ಬೀಜಗಳನ್ನು ಮುಳುಗಿಸಿಡುವುದರಿಂದ ಅದು ರೋಗದ ಸಂಭವವನ್ನು ಕಡಿಮೆ ಮಾಡುತ್ತದೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ತಾಮ್ರ ಹೊಂದಿರುವ ಬ್ಯಾಕ್ಟೀರಿಯಾನಾಶಕಗಳನ್ನು ರಕ್ಷಕದಂತೆ ಬಳಸಬಹುದು ಮತ್ತು ಭಾಗಶಃ ರೋಗ ನಿಯಂತ್ರಣವನ್ನು ನೀಡಬಹುದು. ರೋಗದ ಚಿಹ್ನೆಯು ಮೊದಲ ಬಾರಿಗೆ ಕಂಡುಬಂದಾಗ ಮತ್ತು ಬೆಚ್ಚಗಿನ, ತೇವಾಂಶವುಳ್ಳ ಪರಿಸ್ಥಿತಿಗಳು ಉಂಟಾದಾಗ 10 ರಿಂದ 14 ದಿನದ ಮಧ್ಯಂತರದಲ್ಲಿ ಇದನ್ನು ಸಿಂಪಡಿಸಬೇಕು. ತಾಮ್ರಕ್ಕೆ ಪ್ರತಿರೋಧ ಬೆಳೆಸಿಕೊಳ್ಳುವುದು ಸಾಮಾನ್ಯವಾದ್ದರಿಂದ, ಮ್ಯಾಂಕೊಜೆಬ್ನೊಂದಿಗೆ ತಾಮ್ರ-ಆಧಾರಿತ ಬ್ಯಾಕ್ಟೀರಿಯಾನಾಶಕಗಳ ಸಂಯೋಜನೆಯನ್ನು ಸಹ ಶಿಫಾರಸು ಮಾಡಲಾಗಿದೆ.

ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ರೋಗ-ಮುಕ್ತ ಬೀಜಗಳನ್ನು ನೆಡಿ.
  • ನಿರೋಧಕ ಪ್ರಭೇದಗಳನ್ನು ಬಳಸಿ.
  • ಎಲೆ ಚುಕ್ಕೆಗಳಿರುವ ಯಾವುದೇ ಸಸಿಗಳನ್ನು ಪರೀಕ್ಷಿಸಿ, ತೆಗೆದುಹಾಕಿ ಮತ್ತು ಸುಟ್ಟು ಹಾಕಿ.
  • ಹೊಲದಲ್ಲಿ ಮತ್ತು ಸುತ್ತಲಿರುವ ಕಳೆಗಳನ್ನು ತೆಗೆದುಹಾಕಿ.
  • ಮಣ್ಣಿನಿಂದ ಸಸ್ಯಕ್ಕೆ ಸೋಂಕಾಗುವುದನ್ನು ತಡೆಗಟ್ಟಲು ಮಣ್ಣಿನ ಮೇಲೆ ಹಸಿಗೊಬ್ಬರವನ್ನು ಮುಚ್ಚಿ.
  • ಉಪಕರಣ ಮತ್ತು ಸಾಧನಗಳನ್ನು ಸ್ವಚ್ಛಗೊಳಿಸಿ.
  • ತುಂತುರು ನೀರಾವರಿಯನ್ನು ಬಳಸಬೇಡಿ ಮತ್ತು ಎಲೆಗಳು ತೇವವಾಗಿದ್ದಾಗ ಹೊಲಗಳಲ್ಲಿ ಕೆಲಸ ಮಾಡಬೇಡಿ.
  • ಕೊಯ್ಲಿನ ನಂತರ ಉಳುಮೆ ಮಾಡಿ ಅಥವಾ ಸಸ್ಯಾವಶೇಷಗಳನ್ನು ತೆಗೆದುಹಾಕಿ.
  • ಕೊಯ್ಲಿನ ನಂತರ ಮಣ್ಣುಗಳ ಸೌರೀಕರಣವನ್ನು ಯೋಜಿಸಿ.
  • 2-3 ವರ್ಷಗಳ ಸರದಿ ಬೆಳೆಯನ್ನು ಸೂಚಿಸಲಾಗುತ್ತದೆ.